ಮತ್ತೊಮ್ಮೆ ಕುಳಿತ್ತಿದ್ದೇನೆ
ನಿನ್ನ ಬಣ್ಣಿಸಲೆಂದು,
ಬೆಳಗಿನೋಕುಳಿಯಲ್ಲಿ ಮೆರೆವ
ದಿಗಂತದ ಚೆಲುವ ಕೆಂಪು,
ಗರಿಕೆ ತುದಿಯಲಿ ಕುಳಿತ
ಹನಿ ಇಬ್ಬನಿಯ ಹೊಳಪು,
ಸುರಿ ಮಳೆಯ ಹನಿಗಳೆದೆಯಲ್ಲಿ
ನಿನ್ನದೇ ಹೆಸರು,
ನಕ್ಕು ನಲಿವ ಹೂಗಳೆದೆ ಕಂಪಿಗೆ
ನಿನ್ನದೇ ಉಸಿರು,
ಸುರಿವ ಕಪ್ಪು ಕಾರಿರುಳಿಗೆ
ನಿನ್ನ ನಗೆ ಬೆಳಕು,
ನೀಲಿ ಬಾನ ಒಂಟಿ ಚಂದ್ರಮಗೆ
ನಿನ್ನ ಕಂಗಳದೇ ಸೆಳಕು
ಕನಸು ಕಾಣುವ ಎದೆ ತಿದಿಗೆ ಜೀವ
ನಿನ್ನದೇ ಉಸಿರು,
ಮರೆತಾದರು ಸರಿ ನಿನ್ನೆದೆಯೊಲೊಮ್ಮೆ
ಬರೆದು ಬಿಡು ನನ್ನ ಹೆಸರು…
— ಗಣೇಶ…
ಪಾಪಿ, ಇಷ್ಟೆಲ್ಲಾ ಬರೆಯೋಕೆ ಸ್ಪೂರ್ತಿಯಾಗ್ತಿ, ಜೀವ ಅನ್ನಿಸ್ತಿ, ಮತ್ತೇನೋ ಹೇಳ್ಬೇಕು ಅನ್ನೊಷ್ಟರಲ್ಲಿ ಕನಸು ಕರಗಿಸಿ ಮರೆಯಾಗಿ ಬಿಡ್ತಿ. ನಿನ್ನ ಜತೆ ಕಡಲತೀರದಗುಂಟ ಬರಿದೇ ಕಾಲಲ್ಲಿ ಒಂದಷ್ಟು ದೂರ ಹಾಗೆ ನಡ್ಕೊಂಡು ಹೋಗೋ ಆಸೆ ಇದೆ, ಒಂದು ಬೆಳದಿಂಗಳಿರುಳು ಪೂರಾ ನಿನ್ನ ನಗು ನೋಡ್ತಾ ಚಂದ್ರನ್ನ ಗೇಲಿ ಮಾಡ್ತಾ ಚುಡಾಯಿಸೋ ಆಸೆ ಇದೆ, ಮತ್ತೆ ಆಡಿದರೂ ಮುಂದಿನ ಜನ್ನಕ್ಕೂ ಮುಗಿಯದಷ್ಟು ಮಾತಿದೆ, ಅದನ್ನೆಲ್ಲಾ ನಿಂಜೊತೆ ಆಡ್ಬೇಕನ್ನೋ ಆಸೆ ಇದೆ, ಹೇಳ್ಕೊಳ್ಳೊಕೆ ಆಗ್ದೇ ಇರೋಷ್ಟು ತುಡಿತ ಇದೆ, ಇನ್ನೂ ತುಂಬಾ ಆಸೆ ಇದೆ ಅದಕ್ಕೆ ಒಂದು ಜನ್ಮ ಸಾಲ್ದು ಬಿಡು ಆದ್ರೂ ಈ ಜನ್ಮದಲ್ಲೇ ಅಷ್ಟೂ ಜನ್ಮದ ಬದುಕನ್ನ ನಿಂಜೊತೆ ಬದುಕ್ಬೇಕು ಅನ್ನೋ ಆಸೆ ಇದೆ……. ಯಾವಾಗ್ ಸಿಗ್ತಿ ಹೇಳು……???
