ನಿನ್ನ ನೆನಪು…
ಚಿಗುರು ಮಾವನ್ನರಸಿ
ಹೊರಡುವ
ಕೋಗಿಲೆಯ ಇಂಪು,
ಬಿರು ಬೇಸಿಗೆಯಲ್ಲಿ
ಅರ್ಧ ಸುರಿದ ಮಳೆ,
ಒಟ್ಟಿನಲ್ಲಿ ನನ್ನ ಮನದ
ನೆಮ್ಮದಿ ಕೆಡಿಸಿದ
ಸುಂದರ ಕನಸು…
ಪುಟ್ಟಾ………
ಯಾಕೋ ತುಂಬಾ ಬೇಸರವಾಗ್ತಿದೆ ಕಣೆ. ಮಳೆಗಾಗಿ ಕಾದ ನೆಲ, ಮಳೆ ಬರದೆ ಇದ್ದಾಗ ಬಿಡುವ ನಿಟ್ಟುಸಿರನಷ್ಟು ತಾಪ ಒಳಗೆ ಸುಡ್ತಾ ಇದೆ. ಹೀಗೆ ಇದ್ದಕ್ಕಿದ್ದ ಹಾಗೆ ಕಾಡೋ ಖಿನ್ನತೆ ಜೊತೆಗೆ ನಿನ್ನ ನೆನಪೂ ಸೇರಿಬಿಟ್ರೆ, ಥೂ… ಇದೂ ಒಂದು ಬದುಕಾ….?? ಅನ್ಸಿಬಿಡುತ್ತೆ ಕಣೆ. ಆ ಬೇಗೆ ಯಾರ್ಗೂ ಬೇಡ ಕಣೆ. ನಿನ್ನ ನೆನಪೋ, ಅದೂ ಹೊತ್ತಲ್ಲದ ಹೊತ್ತಲ್ಲಿ ಬರುತ್ತೆ. ಕಡಲಿಗಾದ್ರೂ ತೀರ ಮೀರದ ಸಂಯಮ ಇರುತ್ತೆ, ನಿನ್ನ ನೆನಪಿಗೆ ಅದೂ ಇಲ್ಲ. ಯಾವಾಗಲಾದರೂ ಸರಿ ಬೇಡದ ಅತಿಥಿ ಮನೆಗೆ ಬಂದ ಹಾಗೆ, ಬಂದ ಮೇಲೆ ಅವನು ಹೊರಡುವಾಗ ಏನೋ ಮರೆಯದ ಬೇಸರ ಉಳಿಸಿ ಹೋಗ್ತಾನಲ್ಲ ಹಾಗೆ. ಯಾಕೇ ನನ್ನ ಇಷ್ಟು ಕಾಡಿಸ್ತಿ ..? ಪಾಪಿ, ನೀನು ಎದುರು ಬಂದಾಗ ಆಡೋ ಮಾತೆಲ್ಲಾ ಎಲ್ಲೋ ಮಾಸ್ತರರ ಹೆದರಿಕೆಗೆ ಬೆದರಿದ ಹುಡುಗರ ಹಾಗೆ ಗಂಟಲ್ಲಲ್ಲೇ ಉಳಿದು ಹೋಗ್ತವೆ. ಅದಾವ ಮಾಯೆಯೇ ನಿಂದು….? ನಿನ್ನ ನೋಡ್ತಿದ್ದ ಹಾಗೆ ಎಲ್ಲಾ ಮರೆತು ನಿನ್ನ ಮುಖ ನೋಡ್ತಾ ಹಾಗೇ ಇಡೀ ದಿನ ಕೂತ್ಕೊಂಡ್ ಬಿಡ್ಬೇಕು ಅನ್ಸುತ್ತೆ. ನಿನ್ನನ್ನ ವಾಚಾಮಗೋಚರವಾಗಿ ಬಯ್ಬೇಕು ಅಂದ್ಕೊಂಡಿರೋ ನಾಲಿಗೆಗೂ ಅದು ಮರೆತು ಹೋಗಿ ನಿನ್ನನ್ನ ಹೊಗಳ್ತಾ ಹೊಸಾ ಕವನ ಕಟ್ಟುತ್ತೆ.
ಪುಟ್ಟಾ , ಒಂದಂತೂ ಹೇಳ್ತೀನಿ ಪ್ರಪಂಚದಲ್ಲಿ ಯಾರೂ ನಿನ್ನನ್ನ ನನ್ನಷ್ಟು ಪ್ರೀತ್ಸೋಕೆ ಸಾಧ್ಯಾನೆ ಇಲ್ಲಾ ಕಣೆ. ಯಾಕಂದ್ರೆ ನನ್ನ ಮೊದಲ ಪ್ರೀತಿ ನೀನೆ ಕಣೆ. ಮೊದಲ ಪ್ರೀತಿಗೂ, ಮೊದಲ ಮಗುವಿಗೂ ಯಾವುದೇ ವ್ಯತ್ಯಾಸವಿಲ್ಲ ಕಣೆ. ಬೇಕಾದ್ರೆ ಯಾರಾದ್ರೂ ತಾಯಿನೇ ಕೇಳು ಮೊದಲ ಮಗುವಿನ ಪುಳಕ ಹೇಗೆ ಅಂತ. ನೀನೊಂತರಾ ಮರೆತೂ ಮರೆಯದ ಹಾಡು, ಮನಸ್ಸು ಪ್ರಜ್ನೆ ತಪ್ಪಿದ್ರೂ ಗುನುಗೋ ಹೆಸರು. ಪಾಪಿ ನಿಂಗ್ಯಾವಾಗ ನಾನು ಅರ್ಥ ಆಗ್ತಿನೋ..? ನೀನ್ಯಾವಾಗ ನನ್ನ ಬೆಳಕಾಗ್ತೀಯೋ…? ಕಾಯ್ತಾ ಇದ್ದೀನಿ ಕಣೆ ಆ ದಿನಕ್ಕೋಸ್ಕರ. ಆ ದಿನ ನನ್ನ ಬದುಕಿನ ಕಡೇ ದಿನ ಆದ್ರೂ ಸರಿ ಕಾಯ್ತಾ ಇರ್ತೀನಿ.. ಮರೀಬೇಡ….
ಇಂತಿ ನಿನ್ನ ಪ್ರೀತಿಯ,
……………………………………..
ಹೆಸ್ರು ಬೇರೆ ಬರೀಬೇಕ..?? ನಿನ್ನ ಮನಸನ್ನೇ ಕೇಳು.. ಅದು ಹೇಳುತ್ತೇ…..
—- ಗಣೇಶ….
